ಅನುಬಿಂಬ

ಒಂದು ವಸ್ತುವಿನ ಬಿಂಬ ಆ ವಸ್ತು ಇಲ್ಲದಾಗಲೂ ಕಾಣಬಂದರೆ ಅದನ್ನು ಅನುಬಿಂಬ ಅಥವಾ ಪಶ್ಚಾತ್‍ಪ್ರತಿಕೃತಿ ಎಂದು ಹೇಳುತ್ತಾರೆ. ಮಕ್ಕಳು ದೀಪಾವಳಿ ಹಬ್ಬದಲ್ಲಿ ಸುರುಸುರುಬತ್ತಿಯನ್ನು ಹೊತ್ತಿಸಿ ಅದನ್ನು ಕೈಯಲ್ಲಿ ಹಿಡಿದು ತಿರುಗಿಸಿದಾಗ ಅಗ್ನಿಯ ವೃತ್ತರೇಖೆಯೊಂದು ಕಾಣಿಸುತ್ತದೆ. ನ್ಯಾಯವಾಗಿ ಬತ್ತಿ ಇರುವ ಕಡೆ ಮಾತ್ರ ಜ್ವಾಲೆ ಕಾಣಿಸಬೇಕು. ಆದರೆ ಅದನ್ನು ರಭಸದಿಂದ ತಿರುಗಿಸಿದಾಗ ಜ್ವಾಲಾರೇಖೆ ಅಥವಾ ವೃತ್ತ ಕಾಣಿಸಿಕೊಳ್ಳುತ್ತದೆ. ಇದನ್ನು ಕುರಿತು ನ್ಯೂಟನ್ (1704) ವಿಚಾರ ಮಾಡಿದ್ದಾನೆ. ಅನಂತರ ಅಮೆರಿಕದ ವಿಜ್ಞಾನಿ ಮತ್ತು ರಾಜನೀತಿಜ್ಞ ಬೆಂಜಮಿನ್ ಫ್ರಾಂಕ್‍ಲಿನ್ ಅನುಬಿಂಬಗಳು ಉಂಟಾಗುವ ವಿಧಾನವನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟ (1765). ಒಂದು ದಪ್ಪ ಕಪ್ಪುಕಾಗದವನ್ನು ತೆಗೆದುಕೊಂಡು ಅದರ ಮಧ್ಯೆ ಬಿಳುಪಾದ ವೃತ್ತ ರೇಖೆಯನ್ನೊ ಅಥವಾ ಚಚ್ಚೌಕವನ್ನೊ ಎಳೆದು ಸ್ವಲ್ಪಕಾಲ ನೋಡಿ ಅನಂತರ ಬಿಳಿಯ ಕಾಗದವನ್ನು ನೋಡಿದರೆ ಅದು ಕಪ್ಪುಬಣ್ಣದ ವೃತ್ತಾಕಾರವಾಗಿ ಅಥವಾ ಚಚ್ಚೌಕವಾಗಿ ಕಾಣುತ್ತದೆ. ರಾತ್ರಿವೇಳೆ ಕೊಠಡಿಯಲ್ಲಿರುವ ದೀಪವನ್ನು ಆರಿಸಿದ ಕ್ಷಣದಲ್ಲಿ ಕತ್ತಲಮಧ್ಯೆ ಆ ದೀಪಾಕಾರದ ಬಿಂಬ ನಮ್ಮ ಕಣ್ಣಿಗೆ ಕಾಣಿಸುವುದು.

ಒಂದು ವಸ್ತುವನ್ನು ನೋಡಿದಾಗ ಅದು ಕಣ್ಣಿನೊಳಗಿರುವ ನರಗಳನ್ನು ಪ್ರಚೋದಿಸುವುದರಿಂದ ಆ ವಸ್ತುವಿನ ಆಕಾರ ಬಣ್ಣ ಪ್ರಕಾಶ ಮುಂತಾದವು ನಮಗೆ ಕಾಣುತ್ತವೆ. ಆ ವಸ್ತುವನ್ನು ದಿಟ್ಟಿಸಿನೋಡಿ ಕಣ್ಣು ಮುಚ್ಚಿಕೊಂಡರೆ ಅಥವಾ ಒಂದು ಬಿಳಿಯ ಪ್ರದೇಶವನ್ನೊ ಅಥವಾ ಕಪ್ಪು ಪ್ರದೇಶವನ್ನೊ ನೋಡಿದಾಗ ಆ ಹಿಂದಿನ ವಸ್ತುವಿನ ಅನುಬಿಂಬ ಕಣ್ಣಿಗೆ ಕಾಣಿಸುವುದು. ಇದಕ್ಕೆ ಕಾರಣ ವಸ್ತು ಇಲ್ಲದಿದ್ದರೂ ಪ್ರಚೋದನೆ ಮುಂದುವರಿಯುವುದೇ ಆಗಿದೆ.

ಒಂದು ಕೆಂಪುಬಣ್ಣದ ಆಕೃತಿಯನ್ನು ಸ್ವಲ್ಪ ಹೊತ್ತು ದಿಟ್ಟಿಸಿನೋಡಿ ಅನಂತರ ಒಂದು ಬಿಳಿ ಕಾಗದವನ್ನು ನೋಡಿದಾಗ ಹಸಿರು ಬಣ್ಣದ ಆಕೃತಿ ಕಾಣುವುದು. ಹಳದಿ ಬಣ್ಣದ ಆಕೃತಿಯನ್ನು ನೋಡಿ ಬಿಳಿ ಕಾಗದದ ಮೇಲೆ ಕಣ್ಣನ್ನು ಹಾಯಿಸಿದರೆ ನೀಲಿಬಣ್ಣದ ಆಕೃತಿ ಕಾಣುವುದು. ಇಷ್ಟೇ ಅಲ್ಲದೆ ವರ್ಣಮಿಶ್ರಣವೂ ಅನುಬಿಂಬದ ಮೂಲಕ ಉಂಟಾಗುವುದು. ಒಂದು ಹಸಿರು ಬಣ್ಣದ ಗೋಳಾಕಾರವನ್ನು ದಿಟ್ಟಿಸಿ ನೋಡಿ ಅನಂತರ ಅದೇ ಪ್ರಮಾಣದ ಹಳದಿ ಆಕೃತಿಯನ್ನು ನೋಡಿದರೆ ಅದು ಕಿತ್ತಲೆಹಣ್ಣಿನ ಬಣ್ಣದ್ದಾಗಿ ಕಾಣಿಸುವುದು. ಹೆರಿಂಗ್‍ನ ಆಧಾರಕಲ್ಪನೆಯ (ಹೈಪಾಥಿಸಿಸ್) ಪ್ರಕಾರ ಹಸಿರು ಬಣ್ಣದ ವಸ್ತುವನ್ನು ನೋಡಿದಲ್ಲಿ ಅದರ ಅನುಬಿಂಬದಲ್ಲಿ ಅದಕ್ಕೆ ವಿರೋಧವಾದ ಕೆಂಪುಬಣ್ಣದ ಸಂವೇದನೆ ನಮ್ಮಲ್ಲಿ ಉಂಟಾಗುವುದು. ಈ ಅನುಬಿಂಬಸಂವೇದನೆ ಹಳದಿ ಬಣ್ಣದೊಂದಿಗೆ ಮಿಶ್ರವಾಗಿ ಕಿತ್ತಲೆಹಣ್ಣಿನ ಬಣ್ಣದ ಸಂವೇದನೆಯನ್ನು ಉಂಟುಮಾಡುವುದು.							
(ಬಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ